ಫಿಲ್‍ಪಾಟ್ಸ್, ಈಡನ್
1862-1960. ಇಂಗ್ಲಿಷ್ ಕಾದಂಬರಿಕಾರ, ಕವಿ ಹಾಗೂ ನಾಟಕಕಾರ, ಹುಟ್ಟಿದ್ದು ಭಾರತದ ಆಬು ಗಿರಿಯಲ್ಲಿ. ಆಗ ಈತನ ತಂದೆ ಕ್ಯಾಪ್ಟನ್ ಹೆನ್ರಿ ಫಿಲ್‍ಪಾಟ್ಸ್ ಹಾರೋತಿ ರಾಜಪುಠಾನಾ ಸಂಸ್ಥಾನಗಳ ಪೊಲಿಟಿಕಲ್ ಏಜಂಟ್ ಆಗಿದ್ದ. ಈತ ಪ್ಲಿಮತ್ ಶಾಲೆಯಲ್ಲಿ ಶಕ್ಷಣ ಮುಗಿಸಿ ಅನಂತರ ನಾಟಕ ಕಲೆಯಲ್ಲಿ ಶಿಕ್ಷಣ ಪಡೆಯಲು ಲಂಡನ್ನಿಗೆ ಹೋದ. ಅದು ತನ್ನ ಸ್ವಭಾವಕ್ಕೆ ಒಗ್ಗಲಿಲ್ಲವೆಂದು ಅದನ್ನು ಬಿಟ್ಟು ವಿಮಾಕಂಪೆನಿ (1880-90) ಸೇರಿದ. ಬಿಡುವಿನ ಸಮಯದಲ್ಲಿ ಐಡ್ಲರ್ ಮತ್ತು ಬ್ಲ್ಯಾಕ್ ಅಂಡ್ ಹ್ವೈಟ್ ಎಂಬ ಎರಡು ಕೃತಿಗಳನ್ನು ಬರೆದ. 1892ರಲ್ಲಿ ಎಮಿಲಿ ಟಾಪ್ ಹ್ಯಾಮ್‍ಳನ್ನು ಮದುವೆಯಾದ. ಒಬ್ಬ ಮಗ ಮತ್ತು ಒಬ್ಬ ಮಗಳು ಆದರು. ಮಗಳು ಆ್ಯಡ್‍ಲೈಡ್ ಸಹ ಕಾದಂಬರಿಗಾರ್ತಿ. ತಂದೆಯೊಂದಿಗೆ ಸೇರಿ ಕೆಲವು ನಾಟಕಗಳನ್ನೂ ಬರೆದಳು. 1928ರಲ್ಲಿ ಮೊದಲ ಪತ್ನಿ ತೀರಿಹೋಗಿ ವರ್ಷದೊಳಗೇ ಮರುಮದುವೆಯಾದ. ಟಾಕ್ರ್ವೆಯಲ್ಲಿ ಕೆಲವು ವರ್ಷ ಇದ್ದ. ಅಲ್ಲಿ ಈತನಿಗೆ ಜನ ಮನ್ನಣೆ, ಸ್ವತಂತ್ರ ಪೌರ ಪದವಿ ದೊರೆತವು. ಅನಂತರ ಎಕ್ಸಿಟರ್‍ನಲ್ಲಿ ವಾಸಿಸತೊಡಗಿದ.

	ಈತ ಕೌಟುಂಬಿಕ ವ್ಯಕ್ತಿ. ಸಂಘಜೀವಿಯಲ್ಲ. ಸಮಾಜದ ಬಗ್ಗೆ ಅಪಾರ ತಿರಸ್ಕಾರ, ಶಾಂತವಾದ ಏಕಾಂತ ಜೀವನವನ್ನು ಯಾವಾಗಲೂ ಬಯಸುತ್ತಿದ್ದ. ಈತನ ಅಕ್ಕರೆಯ ಸಂಗಾತಿಗಳು ಬೆಕ್ಕು, ಮನೆಯ ಕೈತೋಟ.

	ಐವತ್ತು ವರ್ಷಕಾಲ ಎಲ್ಲ ಪ್ರಕಾರಗಳಲ್ಲೂ ಬರೆಯುತ್ತಿದ್ದನಾದರೂ ಈತನ ವಿಪುಲ ಲೇಖನ ರಾಶಿಯಲ್ಲಿ ಡಾರ್ಟ್‍ಮೂರ್ ಕಾದಂಬರಿಗಳು ಮಾತ್ರ ಅಮರವಾಗಿ ನಿಲ್ಲತಕ್ಕವಾಗಿವೆ. ಹಾರ್ಡಿಯ ವೆಸೆಕ್ಸ್ ಕಾದಂಬರಿಗಳನ್ನು ಇವು ನೆನಪಿಗೆ ತರುತ್ತವೆ.

	ಹ್ಯಾರಿಂಗ್ಟನ್ ಹೆಕ್ಸ್ ಎಂಬ ಕಾವ್ಯನಾಮದಲ್ಲಿ, ಕೆಲವು ಸಲ ನಿಜವಾದ ಹೆಸರಿನಲ್ಲಿ ಮಿಸ್ಟೆರಿ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆದ. ಇವುಗಳಲ್ಲಿ ಎ ವಾಯ್ಸ್ ಫ್ರಮ್ ದಿ ಡಾರ್ಕ್, ದಿ ರೆಡ್‍ರೆಡ್ ಮಿನೇಸ್, ದಿ ಗ್ರೇ ರೂಮ್ ಇವು ಶ್ರೇಷ್ಠ ಎನಿಸಿವೆ. ಅದ್ಭುತ ಅಸಾಧಾರಣ ಸಂಗತಿಗಳ ಸೊಗಸಾದ ನಿರೂಪಣೆ ಗಟ್ಟಿಯಾದ ಪಾತ್ರ ಚಿತ್ರಣ ಇವುಗಳ ಗುಣ. ಇವಲ್ಲದೆ ಮಿಶ್ರಜಾತಿಯ ಕಾದಂಬರಿ ಸಣ್ಣಕತೆ, ಲಲಿತ ಪ್ರಬಂಧ, ಹಾಸ್ಯಲೇಖನಗಳು, ನಾಟಕ ಮುಂತಾದವು ಈತನ ಲೇಖನಿಯಿಂದ ಮೂಡಿವೆ.

	ಪ್ರಾದೇಶಕ ಕಾದಂಬರಿ ರಚನೆಯಲ್ಲಿ ಈತನದು ದೊಡ್ಡ ಹೆಸರು. ವ್ಯಕ್ತಿ ಚಿತ್ರಣ, ಪ್ರಕೃತಿ ಚಿತ್ರಣ ನೀಡುವುದರಲ್ಲಿ ವಿಧಿಯ ಲೀಲೆಯಲ್ಲಿ ನಂಬಿಕೆ ಇಡುವುದರಲ್ಲಿ ಹಾರ್ಡಿಯನ್ನೇ ಹೋಲುವ ಈತನನ್ನು ಡೆವನ್‍ನ ಹಾರ್ಡಿ ಎಂದೇ ಕರೆಯುತ್ತಿದ್ದರು. ಸಣ್ಣ ಘಟನೆಯಲ್ಲೂ ಜೀವಂತಿಕೆ, ಸಮಗ್ರತೆ, ಏಕತಾಪ್ರಜ್ಞೆ, ಉದ್ವೇಗರಹಿತವಾದ ವಾಸ್ತವತೆ ಮುಂತಾದ ಗುಣಗಳನ್ನು ವಿಮರ್ಶಕರು ಈತನ ಕಾದಂಬರಿಗಳಲ್ಲಿ ಗುರುತಿಸಿದ್ದಾರೆ. ಡೆವನ್‍ಷೈರಿನ ಮೋಹಕ ಜೀವನವನ್ನು ಅಮರವಾಗಿಸಿರುವ ಚಿಲ್ಡ್ರನ್ ಆಫ್ ದಿ ಮಿಸ್ಟ್ (1898) ಸನ್ಸ್ ಆಫ್ ದಿ ಮಾರ್ನಿಂಗ್ (1900), ದಿ ರಿವರ್ (1902), ದಿ ಸೀಕ್ರೆಟ್ ವಿಮೆನ್ (1905), ದಿ ಮದರ್ (1908), ದಿ ತೀಫ್ ಆಫ್ ವಚ್ರ್ಯೂ (1910) ದಿ ವೈಡ್‍ಕೂಂಬ್ ಫೇರ್ (1913)—ಇವು ಪ್ರಸಿದ್ದವಾಗಿವೆ. ದಿ ಹ್ಯೂಮನ್ ಬಾಯ್ ಎರಡು ಸಂಪುಟಗಳ ಶ್ರೇಷ್ಠವಾದ ಶಾಲಾ ಮಕ್ಕಳ ಕಥೆಗಳ ಸಂಕಲನ. ದಿ ಫಾರ್ಮರ್ಸ್ ವೈಫ್ (1916), ಯೆಲ್ಲೊಸ್ಯಾಂಡ್ಸ್ (1926) ಇವು ಈತನ ಯಶಸ್ವಿ ನಾಟಕಗಳು. ಫ್ರಮ್ ದಿ ಆ್ಯಂಗಲ್ ಆಫ್ 88 (1951) ನೆನಪು ಚಿಂತನಗಳ, ಆತ್ಮಕಥಾರೂಪದ ಬರಹ.

	ಹೀಗೆ ನೂರು ಕಾದಂಬರಿಗಳೂ ಸೇರಿದಂತೆ ಒಟ್ಟು 250 ಕೃತಿಗಳನ್ನು ಈತ ರಚಿಸಿದ್ದಾನೆ. ದಿ ಇಸ್ಕೇರಿಯಟ್ (1912), ಬ್ರದರ್ಸ್ ಬೀಸ್ಟ್ (1928), ದಿ ಎನ್ ಛಾನ್‍ಟೆಡ್ ವುಡ್ (1948), ಒನ್ ತಿಂಗ್ ಅಂಡ್ ಅನದರ್ (1954)-ಇವು ಈತನ ಕವನ ಮತ್ತು ಪ್ರಬಂಧಗಳ ಸಂಕಲನಗಳಿಲ್ಲಿ ಹೆಸರಾಗಿರುವ ಕೃತಿಗಳು.

	ಲಿಟರರಿಗೈಡ್ ಮುಂತಾದ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದ. ಎಕ್ಸಿಟರ್‍ಗೆ ಸಮೀಪದ ಬ್ರಾಡ್‍ಕ್ಲಿಸ್ಟ್ ಎಂಬಲ್ಲಿ 1960ರಲ್ಲಿ 98 ವರ್ಷಗಳ ತುಂಬು ಜೀವನ ನಡೆಸಿ ಮರಣ ಹೊಂದಿದ.
(ಕೆ.ಬಿ.ವಿ.;ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ